Sunday

ಪತ್ರಕರ್ತ ರ ಸಂಪುಟ- ಆಡಳಿತ ಮಂಡಳಿಗೆ ಸಂಕಟ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ಸರಕಾರ ರಚಿಸಿದರೆ ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ತಮಾಷೆಯಾಗಿ ನಮ್ಮ ಅನಾಮಿಕ ಓದುಗರೊಬ್ಬರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.
ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ಕುಮಾರನಾಥ (ಮಂಗಳೂರು ವಿಕ) :ಗೃಹ (ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ
ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
.ರಾಘವನ್: ಹಣಕಾಸು, ಕಂದಾಯ
ರಾಧಾಕೃಷ್ಣ ಬಡ್ತಿ: ನೀರಾವರಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ
ಚಿದಂಬರ ಬೈಕಂಪಾಡಿ (ಮಂಗಳೂರು) : ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಕರಿಸ್ವಾಮಿ : () ಸಹಕಾರ
ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ
ಪಿ.ತ್ಯಾಗರಾಜ್: ಇಂಧನ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ

ವಿನಾಯಕ ಭಟ್ ಮೂರೂರು, ಶಿವಪ್ರಸಾದ್ ಟಿ.ಆರ್.: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ
ಲೋಕೇಶ್ ಕಾಯರ್ಗ : ಕಾರ್ಮಿಕ
ಅರವಿಂದ ನಾವಡ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್

ನಿಗಮ ಮಂಡಳಿಗೆ ಮೊದಲ ಪ್ರಾಶಸ್ತ್ಯ:
ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು, ಕೆ.ವಿ.ಪ್ರಭಾಕರ್


ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.
ಕೃಪೆ:ಸಂಪಾದಕೀಯ ( ಸ್ವಲ್ಪ ಎಡಿಟ್ ಮಾಡಲಾಗಿದೆ)

Friday

ಚೇತನಾ ಬರೆದಾಗ

ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು, ಮೂಲ ಲೇಖನವನ್ನು ತಿರುಚಲಾಗಿದೆ ಎಂದು ಸ್ವತಃ ತಸ್ಲೀಮಾ ನಸ್ರೀನ್ ಸ್ಪಷ್ಟನೆ ನೀಡಿದ್ದು ನಿಮಗೆ ನೆನಪಿರಬಹುದು. ಕನ್ನಡಪ್ರಭ ಸಾಪ್ತಾಹಿಕದಲ್ಲಿ ಸಿಂಧು ಎಂಬ ಹೆಸರಿನಲ್ಲಿ ಪ್ರಕಟಗೊಂಡ ಈ ಲೇಖನವನ್ನು ಬರೆದಿದ್ದು ಚೇತನಾ ತೀರ್ಥಹಳ್ಳಿಯವರು ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದಾಗಿ ಚೇತನಾ ಸಾಕಷ್ಟು ನೊಂದಿದ್ದರು. ಈಗ ಲೇಖನ ಬರೆದದ್ದು ಯಾರು ಎಂಬುದು ಬಹಿರಂಗವಾಗಿದೆ. ಆ ದಿನಗಳಲ್ಲಿ ತಾವು ಅನುಭವಿಸಿದ ನೋವನ್ನು ಚೇತನಾ ಇದೀಗ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಪಡೆದು ಈ ಬರಹವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಕು ಎನ್ನುವಷ್ಟರಲ್ಲಿ ಅವರೇ ಈ ಲೇಖನವನ್ನು ಪ್ರಕಟಣೆಗಾಗಿ ಮೇಲ್ ಮಾಡಿದ್ದಾರೆ. ಚೇತನಾ ಅವರ ಈ ಲೇಖನ ಅವರ ವಿರುದ್ಧ ಪಿತೂರಿ ನಡೆಸಿದವರ ಕಣ್ತೆರೆಸಲಿ ಎಂಬುದು ನಮ್ಮ ಆಶಯ. ಚೇತನಾ ಅವರಿಗೆ ನಮ್ಮ ನೈತಿಕ ಬೆಂಬಲವಿರುತ್ತದೆ

ಕ.ಪ್ರ,. ತಸ್ಲಿಮಾ ವಿವಾದದ ಹಿಂದೆ ಜೇಪಿ: ಚೇತನ ತೀರ್ಥಳ್ಳಿ

ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ. ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಚೇತನಾ ತೀರ್ಥಹಳ್ಳಿ
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು. ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

ಕೃಪೆ: ಸಂಪಾದಕೀಯ ಬ್ಲಾಗ್ ಗೆ ಚೇತನಾ ತೀರ್ಥಳ್ಳಿ ಬರೆದ ಪತ್ರ

ಕ್ಯಾಫ್ಟನ್ ರಂಗನ ಮೇಜರ್ ದುರಂತ !

ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.

ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.

ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.

ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.

ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.

ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?

ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.

ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.

ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.
ಕೃಪೆ: ಮೀಡಿಯಾ ಮನ

ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!

ಸಂಪಾದಕೀಯ ಬ್ಲಾಗ್ ಯಾರದ್ದು?

ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೆಲವೇ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.
ಹೇಗೆ ಅಂತೀರಾ?

ಅದಕ್ಕಾಗಿ ನೀವು ತುಸು ಕಾಯಬೇಕು. ಏನಂತೀರಾ?

ಎಲ್ಲರ ತನಿಖೆ ಮಾಡುವ, ತಾವೇ ಮಾಧ್ಯಮಲೋಕದ ಪರಮ ಪ್ರಚಂಡರು ಎಂಬಂತೆ ಪೋಸು ಕೊಡುವ ಇವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಬೇಡವಾ?
ಇವರ ತನಿಖೆಯನ್ನೂ ಮಾಡೋಣ..
.
ಇವರು ಈಗಾಗಲೇ ಬೃಹಸ್ಪತಿಗಳು. ಇವರು ಯಾರ ಮೇಲೆ ಬೇಕಾದರೂ ಕಾಮೆಂಟ್ ಮಾಡಬಲ್ಲರು. ಎಲ್ಲರೂ ಇವರಿಗೆ ಕಿವಿ ಹಿಂಡಿಸಿಕೊಳ್ಳಲು ಅನುಮತಿ ಕೊಟ್ಟುಬಿಟ್ಟಿದ್ದಾರೆ. ಹಾಗಿದೆ ಇವರ ಧೋರಣೆ !

ನಿಮ್ಮ ಕುತೂಹಲ ತಣಿಸಲು ನಾವು ಸಿದ್ಧ. ಆರ್ ಯು ರೆಡಿ ?
( ಕೃಪೆ :ಸುದ್ದಿರಂಗ ಬ್ಲಾಗ್ )

....................

ಏನೇನ್ ಮಾಡ್ತೀವಿ ನೋಡ್ತಾ ಇರಿ!

ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.

ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?

ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?

ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.

ಗೊತ್ತಾಯ್ತ ಸ್ವಾಮಿ ಸಂಪಾದಕರೆ?

ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.
ಕೃಪೆ: ಮೀಡಿಯಾ ಮನ

Tuesday

ನಟಿ ರಮ್ಯಾ ಹಾಗು ನಿರ್ಮಾಪಕ ಗಣೇಶ್ ನಡುವಿನ ಜಗಳ ಇಡೀ ಕನ್ನಡ ಸಿನಿಮಾರಂಗವನ್ನೇ ಎರಡು ಭಾಗವಾಗಿ ವಿಂಗಡಿಸಿದೆ. ಒಂದೆಡೆ ಕಲಾವಿದರ ಸಂಘ ಮತ್ತೊಂದೆಡೆ ನಿರ್ಮಾಪಕರ ಸಂಘ ತೊಡೆ ತಟ್ಟಿ ನಿಂತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ನಿಂತು ಏನೂ ಮಾಡಲಾಗದೆ ಒದ್ದಾಡುತ್ತಿದೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅಬ್ಬರಿಸುತ್ತಿದ್ದರೆ, ಅತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ನಾನೇ ಹೈಕಮಾಂಡ್ ಎಂದು ರೋಧಿಸುತ್ತಿದ್ದಾರೆ.

ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?

ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್‌ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್‌ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.

ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.

ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್‌ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್‌ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.

ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್‌ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.

ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.

ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.

ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್‌ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.

ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?

ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?:
ಕೃಪೆ ಸಂಪಾದಕೀಯ

Monday

ಪತ್ರಕರ್ತಾರಾ ರಾಜಕಾರಣಿಗಳ ವಕ್ರ ತುಂದೊಕ್ತಿ...ವದಂತಿ

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ…. ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ…

ಇವ್ರೆಲ್ಲ ಯಾರು? ಇವ್ರ ಬಗ್ಗೆ ಬರೀತಾ ಇರೋರು ಯಾರು? ಎಸ್ ಎಂ ಎಸ್‌ಗಳನ್ನು ಹರಿಬಿಡ್ತಾ ಇರೋರು ಯಾರು? ಇದಕ್ಕೆಲ್ಲ ಏನು ಆಧಾರ? ನಂಗೊತ್ತಿಲ್ಲ.

ಕಳೆದ ಹತ್ತು ದಿನಗಳಿಂದ ಇಂಥದ್ದೇ ವದಂತಿಗಳನ್ನು ಗಿರಣಿಗಳಲ್ಲಿ ಅರೆದು ಅರೆದು ಹೊರೆ ಹರಿಬಿಡಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಏನೋ ಭಯಂಕರ ಬದಲಾವಣೆಗಳು ಆಗಿಬಿಡುತ್ತವೆ ಅನ್ನೋ ಕಲ್ಪನೆಯನ್ನು ಕೊಡೋ ಈ ವದಂತಿಗಳು ನಿಜವಾಗುವವರೆಗೂ ಟ್ರಾಶ್ ಎಂದೇ ಕರೆಯಬೇಕಷ್ಟೆ. ವದಂತಿಗಳನ್ನು ಆಧರಿಸಿ ಮ್ಯಾನೇಜ್‌ಮೆಂಟ್‌ಗಳು ನಿರ್ಧಾರ ತಗೋಳೋದೇ ಆಗಿದ್ರೆ…. ಆಹಾ…

ಎಂಥ ಮಜಾ ನೋಡಿ, ಸುದ್ದಿಯನ್ನು ಜನರಿಗೆ ತಲುಪಿಸೋ ಪರಮ ಪವಿತ್ರ ಕೆಲಸ ಮಾಡ್ತಾ ಇರೋ ಈ ಪತ್ರಕರ್ತರು ಹರಿದುಬಿಡ್ತಾ ಇರೋ ವದಂತಿಗಳೇನು…. ಇವುಗಳ ಸತ್ಯಾಸತ್ಯತೆ ಎಷ್ಟು? ವದಂತಿಗಳಿಗೇ ಬ್ಲಾಗುಗಳನ್ನು ಬಳಸಿಕೊಳ್ಳೋ ಹೊಸ ಪ್ರವೃತ್ತಿಗೆ ಏನು ಹೇಳೋಣ? ದಾಖಲೆಯಿಲ್ಲ, ಅಧಿಕೃತ ಹೇಳಿಕೆಯಿಲ್ಲ, ಕಣ್ಣಿಗೆ ಕಾಣುವ ಯಾವುದೇ ಬೆಳವಣಿಗೆಗಳೂ ಇಲ್ಲ. ಆದರೂ ಇವೆಲ್ಲ ಕ್ಷಣಕ್ಷಣಕ್ಕೂ ನಡೀತಾ ಇರೋ ವಿದ್ಯಮಾನಗಳು ಎಂದು ಮಾತನಾಡುವ ಪತ್ರಕರ್ತರು ನಮ್ಮ ನಡುವೆಯೇ ಇದ್ದಾರೆ. ನಿಜಘಟನೆಗಳನ್ನು ವರದಿ ಮಾಡುವವರು ಹೀಗೆ ಅತಿರಂಜಿತ ವದಂತಿಗಳನ್ನು ಬರೆಯುತ್ತಿರೋದು ನೋಡಿದರೆ ವಾಕರಿಕೆ ಬರುತ್ತದೆ.

ವಿಮರ್ಶಕಿ ಎಂದೂ ಇಂಥ ವದಂತಿಗಳನ್ನು ಬರೆಯುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾಳೆ. ನಡೆದ ಘಟನೆಗಳಷ್ಟೇ ವಿಮರ್ಶಕಿಗೆ ಆಧಾರ ಮತ್ತು ಮೂಲ. ಅದನ್ನು ಬಿಟ್ಟು ವದಂತಿಗಳನ್ನು ಹರಡುವವರಿಗೆ ಆಕಾಶವಾಣಿಯಲ್ಲಿ ಬಿತ್ತರವಾಗುವಂತೆ ಎಚ್ಚರಿಕೆ ನೀಡಬೇಕಿದೆ. ವದಂತಿಗಳನ್ನು ಹರಡಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಳ್ಳಬೇಕಿದೆ.

ಇಲ್ಲಿ ಅವರಿವರು ಆ ಸಂಸ್ಥೆ ಬಿಡುವ, ಸೇರುವ ವಿಷಯಗಳನ್ನು ಅತ್ಯಂತ ಜಾಣತನದಿಂದ ಹರಡುತ್ತಿರುವ ಕುತ್ಸಿತ ಮನಸ್ಸುಗಳಿವೆ ಎಂದೇ ಬಲವಾಗಿ ಅನ್ನಿಸುತ್ತದೆ. ಇಂಥ ವ್ಯಕ್ತಿಗಳನ್ನು ಹುಡುಕಿ ತದಕುವ ಕೆಲಸ ನಡೆಯಬೇಕಿದೆ.

ಒಂದೊಂದು ಪತ್ರಿಕೆಯೂ ಒಂದೊಂದು ಥರದ ಮ್ಯಾನೇಜ್‌ಮೆಂಟನ್ನು ಹೊಂದಿದೆ. ಉದಯವಾಣಿಯ ಆಡಳಿತ ವರ್ಗವು ನಿನ್ನೆ ಮೊನ್ನೆ ಸೇರಿದ ತಿಮ್ಮಪ್ಪ ಭಟ್ಟರನ್ನು ಸಂಸ್ಥೆಯಲ್ಲೇ ಮೂಲೆಗುಂಪಾಗಿಸುವಂಥ ಕ್ಷುದ್ರ ಸಂಸ್ಥೆಯಂತೂ ಅಲ್ಲ. ಕನ್ನಡಪ್ರಭದ ಮ್ಯಾನೇಜ್‌ಮೆಂಟ್ ಒಂದು ವರ್ಷದ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಿಂದ ಕಂಗೆಟ್ಟಿದ್ದರೂ ಪತ್ರಿಕೆಯ ರೀಡರ್‌ಶಿಪ್ಪನ್ನು ಮೇಲೆತ್ತಿದ ಶಿವಸುಬ್ರಹ್ಮಣ್ಯರನ್ನು ಅಷ್ಟು ಸಲೀಸಾಗಿ ಸರಿಸಿಬಿಡುತ್ತದೆ ಎಂದು ನಂಬಬೇಕೆ? ಹಾಗೇನಾದರೂ ನಡೆದೀತು ಅಂದುಕೊಳ್ಳೋಣ. ಆಗ ಅದೊಂದು ದುರಂತವೇ ಹೊರತು ಸಹಜ ಘಟನೆಯಾಗಲಾರದು. ವಿಮರ್ಶಕಿಗೆ ಶಿವಸುಬ್ರಹ್ಮಣ್ಯರನ್ನು ಹೊಗಳಿ ಏನೂ ಆಗಬೇಕಿಲ್ಲ. ಎನ್ ಆರ್ ಎಸ್ ನ ಪ್ರಕಟಿತ ಅಧಿಕೃತ ಅಂಕಿ ಅಂಶಗಳೇ ಸಾಕಲ್ಲವೆ? ವಿಶ್ವೇಶ್ವರ ಭಟ್ಟರು ಪತ್ರಿಕೆಯನ್ನು ಮೇಲೆತ್ತಿದರು ಎಂದು ಎಷ್ಟೇ ನಂಬಬೇಕೆಂದರೂ, ಅದೇ ಹೊತ್ತು ಅವರೇ ಪತ್ರಿಕೆಯ ರೀಡರ್‌ಶಿಪ್ ಕುಸಿಯಲೂ ಕಾರಣರಾದರು ಎಂಬ ಮಾತನ್ನು ಯಾಕೆ ಒಪ್ಪಿಕೊಳ್ಳಬಾರದು? ಅಷ್ಟಿದ್ದಾಗ ಅವರನ್ನು ಯಾವುದೇ ಸಂಸ್ಥೆಯು ಕೆಂಪುಹಾಸಿನ ಸ್ವಾಗತ ನೀಡುತ್ತದೆ ಎಂದು ನಂಬಬೇಕೆ? ಹಾಗೆ ನಡೆಯಿತು ಅಂದುಕೊಳ್ಳೋಣ. ಹಾಗೆ ಸೇರಿಸಿಕೊಳ್ಳುವ ಮ್ಯಾನೇಜ್‌ಮೆಂಟ್‌ಗೆ ಕಾಮನ್‌ಸೆನ್ಸ್ ಇಲ್ಲ ಎಂದೇ ಹೇಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಬಯಸಿ ರಾಜೀನಾಮೆ ನೀಡಿದ ಭಟ್ಟರು ಇನ್ನೂ ಭಾರತದಲ್ಲಿ ಯಾಕೆ ಇದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.

ಪತ್ರಿಕೋದ್ಯಮದ ಬಗ್ಗೆ ಸದಾ ಅತ್ಯಂತ ಹಳೆಯ ದಾಖಲೆಗಳನ್ನೆಲ್ಲ ಎತ್ತಿ ಕಾಲಂ ಬರೆಯುತ್ತಿದ್ದ ಭಟ್ಟರೆಲ್ಲಿ? ಪ್ರತಾಪಸಿಂಹ, ಯಶವಂತ ಸರದೇಶಪಾಂಡೆಯವರ ನಿಯಂತ್ರಣದಲ್ಲಿ ತಮ್ಮ ವೆಬ್‌ಸೈಟನ್ನು ಬಿಟ್ಟುಕೊಟ್ಟು ಹಾಯಾಗಿರುವ ಭಟ್ಟರೆಲ್ಲಿ? ಪತ್ರಿಕೋದ್ಯಮದ ಬಗ್ಗೆ, ತಮ್ಮ ಅನುಭವಗಳನ್ನು ಬರೆಯಲು ಈಗ ಅವರಿಗೆ ಸಕಾಲವಾಗಿತ್ತು. ವ್ಯಕ್ತಿಗತ ನಿಂದನೆ, ಕಟಕಿಗೇ ತಮ್ಮ ವೆಬ್‌ಸೈಟನ್ನು ಮೀಸಲಾಗಿಟ್ಟ ಅವರ `ಕ್ವಾಲಿಟಿ ಪಾಲಿಸಿ’ ಹೇಸಿಗೆ ತರುತ್ತದೆ. ವೆಬ್‌ಜಗತ್ತಿಗೆ ಬಂದಮೇಲೆ ವೆಬ್ ಮಾಧ್ಯಮದ ಪ್ರಾಥಮಿಕ ಹೊಣೆಗಾರಿಕೆಗಳನ್ನೂ ಅರಿಯದೇ ಹೋದ ಭಟ್ಟರ ಬಗ್ಗೆ ಕನಿಕರ ಮೂಡುತ್ತದೆ. ಅವರು ಹಾಗೇ, ಭಟ್ಟಂಗಿಗಳ ವೇದಘೋಷಗಳ ಗುಂಗಿನಲ್ಲೇ ಇದ್ದರೆ ಒಳ್ಳೆಯದು; ಆದಷ್ಟು ಬೇಗ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ!

ಅವರ ಸಂಪಾದಕತ್ವದಲ್ಲಿ ನಡೆದ ಸುದ್ದಿಗಳ ಭಾನಗಡಿಯ ಬಗ್ಗೆ ವಿಮರ್ಶಕಿಯು ಬರೆದ ಯಾವ ಬ್ಲಾಗಿಗೂ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಈಗಲೂ ಅವರು ಮೌನಿಯಂತೆ. ಅವರ ಬಾಯಿ ತೆರೆದಾಗ ಏನೆಲ್ಲ ಘನಘೋರ ಸತ್ಯಗಳು ಹೊರಬೀಳುತ್ತವೆ ಎಂದು ವಿಮರ್ಶಕಿಯಂತೂ ಕಾತರಳಾಗಿಲ್ಲ. ವೆಬ್ ಜಗತ್ತಿಗೆ ಬಂದಮೇಲಾದರೂ ಸ್ವಲ್ಪ ಹೊಸ ಜರ್ನಲಿಸಮ್ ಪಾಠ ಕಲಿತರೆ ಒಳ್ಳೆಯದು ಎಂದಷ್ಟೆ ಹೇಳಬಹುದು.

ಕೃಪೆ :vimarshaki