Tuesday

ನಟಿ ರಮ್ಯಾ ಹಾಗು ನಿರ್ಮಾಪಕ ಗಣೇಶ್ ನಡುವಿನ ಜಗಳ ಇಡೀ ಕನ್ನಡ ಸಿನಿಮಾರಂಗವನ್ನೇ ಎರಡು ಭಾಗವಾಗಿ ವಿಂಗಡಿಸಿದೆ. ಒಂದೆಡೆ ಕಲಾವಿದರ ಸಂಘ ಮತ್ತೊಂದೆಡೆ ನಿರ್ಮಾಪಕರ ಸಂಘ ತೊಡೆ ತಟ್ಟಿ ನಿಂತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ನಿಂತು ಏನೂ ಮಾಡಲಾಗದೆ ಒದ್ದಾಡುತ್ತಿದೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅಬ್ಬರಿಸುತ್ತಿದ್ದರೆ, ಅತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ನಾನೇ ಹೈಕಮಾಂಡ್ ಎಂದು ರೋಧಿಸುತ್ತಿದ್ದಾರೆ.

ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?

ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್‌ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್‌ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.

ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.

ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್‌ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್‌ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.

ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್‌ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.

ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.

ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.

ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್‌ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.

ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?

ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?:
ಕೃಪೆ ಸಂಪಾದಕೀಯ

Monday

ಪತ್ರಕರ್ತಾರಾ ರಾಜಕಾರಣಿಗಳ ವಕ್ರ ತುಂದೊಕ್ತಿ...ವದಂತಿ

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ…. ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ…

ಇವ್ರೆಲ್ಲ ಯಾರು? ಇವ್ರ ಬಗ್ಗೆ ಬರೀತಾ ಇರೋರು ಯಾರು? ಎಸ್ ಎಂ ಎಸ್‌ಗಳನ್ನು ಹರಿಬಿಡ್ತಾ ಇರೋರು ಯಾರು? ಇದಕ್ಕೆಲ್ಲ ಏನು ಆಧಾರ? ನಂಗೊತ್ತಿಲ್ಲ.

ಕಳೆದ ಹತ್ತು ದಿನಗಳಿಂದ ಇಂಥದ್ದೇ ವದಂತಿಗಳನ್ನು ಗಿರಣಿಗಳಲ್ಲಿ ಅರೆದು ಅರೆದು ಹೊರೆ ಹರಿಬಿಡಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಏನೋ ಭಯಂಕರ ಬದಲಾವಣೆಗಳು ಆಗಿಬಿಡುತ್ತವೆ ಅನ್ನೋ ಕಲ್ಪನೆಯನ್ನು ಕೊಡೋ ಈ ವದಂತಿಗಳು ನಿಜವಾಗುವವರೆಗೂ ಟ್ರಾಶ್ ಎಂದೇ ಕರೆಯಬೇಕಷ್ಟೆ. ವದಂತಿಗಳನ್ನು ಆಧರಿಸಿ ಮ್ಯಾನೇಜ್‌ಮೆಂಟ್‌ಗಳು ನಿರ್ಧಾರ ತಗೋಳೋದೇ ಆಗಿದ್ರೆ…. ಆಹಾ…

ಎಂಥ ಮಜಾ ನೋಡಿ, ಸುದ್ದಿಯನ್ನು ಜನರಿಗೆ ತಲುಪಿಸೋ ಪರಮ ಪವಿತ್ರ ಕೆಲಸ ಮಾಡ್ತಾ ಇರೋ ಈ ಪತ್ರಕರ್ತರು ಹರಿದುಬಿಡ್ತಾ ಇರೋ ವದಂತಿಗಳೇನು…. ಇವುಗಳ ಸತ್ಯಾಸತ್ಯತೆ ಎಷ್ಟು? ವದಂತಿಗಳಿಗೇ ಬ್ಲಾಗುಗಳನ್ನು ಬಳಸಿಕೊಳ್ಳೋ ಹೊಸ ಪ್ರವೃತ್ತಿಗೆ ಏನು ಹೇಳೋಣ? ದಾಖಲೆಯಿಲ್ಲ, ಅಧಿಕೃತ ಹೇಳಿಕೆಯಿಲ್ಲ, ಕಣ್ಣಿಗೆ ಕಾಣುವ ಯಾವುದೇ ಬೆಳವಣಿಗೆಗಳೂ ಇಲ್ಲ. ಆದರೂ ಇವೆಲ್ಲ ಕ್ಷಣಕ್ಷಣಕ್ಕೂ ನಡೀತಾ ಇರೋ ವಿದ್ಯಮಾನಗಳು ಎಂದು ಮಾತನಾಡುವ ಪತ್ರಕರ್ತರು ನಮ್ಮ ನಡುವೆಯೇ ಇದ್ದಾರೆ. ನಿಜಘಟನೆಗಳನ್ನು ವರದಿ ಮಾಡುವವರು ಹೀಗೆ ಅತಿರಂಜಿತ ವದಂತಿಗಳನ್ನು ಬರೆಯುತ್ತಿರೋದು ನೋಡಿದರೆ ವಾಕರಿಕೆ ಬರುತ್ತದೆ.

ವಿಮರ್ಶಕಿ ಎಂದೂ ಇಂಥ ವದಂತಿಗಳನ್ನು ಬರೆಯುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾಳೆ. ನಡೆದ ಘಟನೆಗಳಷ್ಟೇ ವಿಮರ್ಶಕಿಗೆ ಆಧಾರ ಮತ್ತು ಮೂಲ. ಅದನ್ನು ಬಿಟ್ಟು ವದಂತಿಗಳನ್ನು ಹರಡುವವರಿಗೆ ಆಕಾಶವಾಣಿಯಲ್ಲಿ ಬಿತ್ತರವಾಗುವಂತೆ ಎಚ್ಚರಿಕೆ ನೀಡಬೇಕಿದೆ. ವದಂತಿಗಳನ್ನು ಹರಡಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಳ್ಳಬೇಕಿದೆ.

ಇಲ್ಲಿ ಅವರಿವರು ಆ ಸಂಸ್ಥೆ ಬಿಡುವ, ಸೇರುವ ವಿಷಯಗಳನ್ನು ಅತ್ಯಂತ ಜಾಣತನದಿಂದ ಹರಡುತ್ತಿರುವ ಕುತ್ಸಿತ ಮನಸ್ಸುಗಳಿವೆ ಎಂದೇ ಬಲವಾಗಿ ಅನ್ನಿಸುತ್ತದೆ. ಇಂಥ ವ್ಯಕ್ತಿಗಳನ್ನು ಹುಡುಕಿ ತದಕುವ ಕೆಲಸ ನಡೆಯಬೇಕಿದೆ.

ಒಂದೊಂದು ಪತ್ರಿಕೆಯೂ ಒಂದೊಂದು ಥರದ ಮ್ಯಾನೇಜ್‌ಮೆಂಟನ್ನು ಹೊಂದಿದೆ. ಉದಯವಾಣಿಯ ಆಡಳಿತ ವರ್ಗವು ನಿನ್ನೆ ಮೊನ್ನೆ ಸೇರಿದ ತಿಮ್ಮಪ್ಪ ಭಟ್ಟರನ್ನು ಸಂಸ್ಥೆಯಲ್ಲೇ ಮೂಲೆಗುಂಪಾಗಿಸುವಂಥ ಕ್ಷುದ್ರ ಸಂಸ್ಥೆಯಂತೂ ಅಲ್ಲ. ಕನ್ನಡಪ್ರಭದ ಮ್ಯಾನೇಜ್‌ಮೆಂಟ್ ಒಂದು ವರ್ಷದ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಿಂದ ಕಂಗೆಟ್ಟಿದ್ದರೂ ಪತ್ರಿಕೆಯ ರೀಡರ್‌ಶಿಪ್ಪನ್ನು ಮೇಲೆತ್ತಿದ ಶಿವಸುಬ್ರಹ್ಮಣ್ಯರನ್ನು ಅಷ್ಟು ಸಲೀಸಾಗಿ ಸರಿಸಿಬಿಡುತ್ತದೆ ಎಂದು ನಂಬಬೇಕೆ? ಹಾಗೇನಾದರೂ ನಡೆದೀತು ಅಂದುಕೊಳ್ಳೋಣ. ಆಗ ಅದೊಂದು ದುರಂತವೇ ಹೊರತು ಸಹಜ ಘಟನೆಯಾಗಲಾರದು. ವಿಮರ್ಶಕಿಗೆ ಶಿವಸುಬ್ರಹ್ಮಣ್ಯರನ್ನು ಹೊಗಳಿ ಏನೂ ಆಗಬೇಕಿಲ್ಲ. ಎನ್ ಆರ್ ಎಸ್ ನ ಪ್ರಕಟಿತ ಅಧಿಕೃತ ಅಂಕಿ ಅಂಶಗಳೇ ಸಾಕಲ್ಲವೆ? ವಿಶ್ವೇಶ್ವರ ಭಟ್ಟರು ಪತ್ರಿಕೆಯನ್ನು ಮೇಲೆತ್ತಿದರು ಎಂದು ಎಷ್ಟೇ ನಂಬಬೇಕೆಂದರೂ, ಅದೇ ಹೊತ್ತು ಅವರೇ ಪತ್ರಿಕೆಯ ರೀಡರ್‌ಶಿಪ್ ಕುಸಿಯಲೂ ಕಾರಣರಾದರು ಎಂಬ ಮಾತನ್ನು ಯಾಕೆ ಒಪ್ಪಿಕೊಳ್ಳಬಾರದು? ಅಷ್ಟಿದ್ದಾಗ ಅವರನ್ನು ಯಾವುದೇ ಸಂಸ್ಥೆಯು ಕೆಂಪುಹಾಸಿನ ಸ್ವಾಗತ ನೀಡುತ್ತದೆ ಎಂದು ನಂಬಬೇಕೆ? ಹಾಗೆ ನಡೆಯಿತು ಅಂದುಕೊಳ್ಳೋಣ. ಹಾಗೆ ಸೇರಿಸಿಕೊಳ್ಳುವ ಮ್ಯಾನೇಜ್‌ಮೆಂಟ್‌ಗೆ ಕಾಮನ್‌ಸೆನ್ಸ್ ಇಲ್ಲ ಎಂದೇ ಹೇಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಬಯಸಿ ರಾಜೀನಾಮೆ ನೀಡಿದ ಭಟ್ಟರು ಇನ್ನೂ ಭಾರತದಲ್ಲಿ ಯಾಕೆ ಇದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.

ಪತ್ರಿಕೋದ್ಯಮದ ಬಗ್ಗೆ ಸದಾ ಅತ್ಯಂತ ಹಳೆಯ ದಾಖಲೆಗಳನ್ನೆಲ್ಲ ಎತ್ತಿ ಕಾಲಂ ಬರೆಯುತ್ತಿದ್ದ ಭಟ್ಟರೆಲ್ಲಿ? ಪ್ರತಾಪಸಿಂಹ, ಯಶವಂತ ಸರದೇಶಪಾಂಡೆಯವರ ನಿಯಂತ್ರಣದಲ್ಲಿ ತಮ್ಮ ವೆಬ್‌ಸೈಟನ್ನು ಬಿಟ್ಟುಕೊಟ್ಟು ಹಾಯಾಗಿರುವ ಭಟ್ಟರೆಲ್ಲಿ? ಪತ್ರಿಕೋದ್ಯಮದ ಬಗ್ಗೆ, ತಮ್ಮ ಅನುಭವಗಳನ್ನು ಬರೆಯಲು ಈಗ ಅವರಿಗೆ ಸಕಾಲವಾಗಿತ್ತು. ವ್ಯಕ್ತಿಗತ ನಿಂದನೆ, ಕಟಕಿಗೇ ತಮ್ಮ ವೆಬ್‌ಸೈಟನ್ನು ಮೀಸಲಾಗಿಟ್ಟ ಅವರ `ಕ್ವಾಲಿಟಿ ಪಾಲಿಸಿ’ ಹೇಸಿಗೆ ತರುತ್ತದೆ. ವೆಬ್‌ಜಗತ್ತಿಗೆ ಬಂದಮೇಲೆ ವೆಬ್ ಮಾಧ್ಯಮದ ಪ್ರಾಥಮಿಕ ಹೊಣೆಗಾರಿಕೆಗಳನ್ನೂ ಅರಿಯದೇ ಹೋದ ಭಟ್ಟರ ಬಗ್ಗೆ ಕನಿಕರ ಮೂಡುತ್ತದೆ. ಅವರು ಹಾಗೇ, ಭಟ್ಟಂಗಿಗಳ ವೇದಘೋಷಗಳ ಗುಂಗಿನಲ್ಲೇ ಇದ್ದರೆ ಒಳ್ಳೆಯದು; ಆದಷ್ಟು ಬೇಗ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ!

ಅವರ ಸಂಪಾದಕತ್ವದಲ್ಲಿ ನಡೆದ ಸುದ್ದಿಗಳ ಭಾನಗಡಿಯ ಬಗ್ಗೆ ವಿಮರ್ಶಕಿಯು ಬರೆದ ಯಾವ ಬ್ಲಾಗಿಗೂ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಈಗಲೂ ಅವರು ಮೌನಿಯಂತೆ. ಅವರ ಬಾಯಿ ತೆರೆದಾಗ ಏನೆಲ್ಲ ಘನಘೋರ ಸತ್ಯಗಳು ಹೊರಬೀಳುತ್ತವೆ ಎಂದು ವಿಮರ್ಶಕಿಯಂತೂ ಕಾತರಳಾಗಿಲ್ಲ. ವೆಬ್ ಜಗತ್ತಿಗೆ ಬಂದಮೇಲಾದರೂ ಸ್ವಲ್ಪ ಹೊಸ ಜರ್ನಲಿಸಮ್ ಪಾಠ ಕಲಿತರೆ ಒಳ್ಳೆಯದು ಎಂದಷ್ಟೆ ಹೇಳಬಹುದು.

ಕೃಪೆ :vimarshaki

ಬಜೆಟ್ ಯಾರು ನಮ್. 1

ಬಜೆಟ್ ಅಂದ್ರೆ ಪತ್ರಕರ್ತರ ಪಾಲಿಗೆ ಹಬ್ಬ. ಅದೊಂದು ಈವೆಂಟ್. ಸವಾಲನ್ನು ಒಡ್ಡುವ ಖುಷಿಯ ಅಸೈನ್‌ಮೆಂಟು. ಹೆಚ್ಚು ಕಡಿಮೆ ನೂರು ಪುಟದ ಪುಸ್ತಕವನ್ನು ಓದಿ, ಅದರಲ್ಲಿ ಎಷ್ಟನ್ನು ಹೇಗೆ ಓದುಗರ ಮುಂದಿಡಬೇಕು ಎಂಬುದು ಅಕ್ಷರಶಃ ಸವಾಲಿನ ಕೆಲಸವೇ. ಪತ್ರಕರ್ತರು ಅಂದೆವಲ್ಲ, ಎಲ್ಲ ಪತ್ರಕರ್ತರಿಗೂ ಹೀಗೇ ಆಗಬೇಕು ಎಂಬುದೇನಿಲ್ಲ. ಕೆಲವರಿಗೆ ಅದು ಬೋರೋ ಬೋರು. ಇಲ್ಲಿ ಅದೇ ರಾಗ ಅದೇ ಹಾಡು ಬಿಡ್ರೀ ಅನ್ನೋ ಸಿನಿಕರಿಗೇನು ಕೊರತೆಯಿಲ್ಲ.

ಆದರೆ ಕೆಲವು ಪತ್ರಕರ್ತರು ಬಜೆಟ್ ಬರುವುದನ್ನೇ ಕಾಯುತ್ತಾರೆ. ಹಾಗೆ ಕಾಯುವವರಿಗೆ ಅಲ್ಪಸ್ವಲ್ಪ ಎಕನಾಮಿಕ್ಸು ಗೊತ್ತಿರುತ್ತದೆ, ಜನರ ನಾಡಿಮಿಡಿತವೂ ಗೊತ್ತಿರುತ್ತದೆ. ಯಾವುದಕ್ಕೆ ಎಷ್ಟು ಹಣ ಹಂಚಿದ್ದಾರೆ, ಎಲ್ಲಿಂದ ಎಷ್ಟು ಹಣ ತರುತ್ತಾರೆ, ಎಷ್ಟು ಸಾಲ ಇದೆ, ಎಷ್ಟು ತೀರಿದೆ, ಇನ್ನೆಷ್ಟು ತರುತ್ತಾರೆ, ಇಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಣ ನಿಜಕ್ಕೂ ಒದಗುತ್ತಾ? ಇತ್ಯಾದಿ ಇತ್ಯಾದಿಗಳನ್ನು ಅವರು ಒಂದೇ ಅಬ್ಸರ್‌ವೇಷನ್‌ನಲ್ಲಿ ಹೇಳಬಲ್ಲರು.

ಅದೆಲ್ಲ ಹಾಗಿರಲಿ, ಆ ಕುರಿತು ಇನ್ನೊಮ್ಮೆ ಚರ್ಚೆ ಮಾಡೋಣ. ಇವತ್ತಿನ ಪತ್ರಿಕೆಗಳನ್ನು ನೋಡಿದ್ರಾ? ಬಜೆಟ್ ಕವರೇಜ್ ಯಾವ ಯಾವ ಪತ್ರಿಕೆಯಲ್ಲಿ ಹೇಗನ್ನಿಸಿತು. ದಯವಿಟ್ಟು ಬರೆದು ತಿಳಿಸಿ.

ನಮಗೆ ಅನ್ನಿಸಿದ ಪ್ರಕಾರ, ಬಜೆಟ್ ಕವರೇಜ್‌ನಲ್ಲಿ ಮೊದಲ ಸ್ಥಾನ ದಕ್ಕಬೇಕಾಗಿರುವುದು ಕನ್ನಡಪ್ರಭಕ್ಕೆ. ಪುಟಪುಟವನ್ನೂ ಕನ್ನಡಪ್ರಭದ ಸಿಬ್ಬಂದಿ ಉತ್ಸಾಹ ಮತ್ತು ಶ್ರದ್ಧೆಯಿಂದ ಕಟ್ಟಿದ್ದಾರೆ. ಒನ್ಸ್ ಎಗೇನ್ ಇಲ್ಲಿ ವಿಶ್ವೇಶ್ವರ ಭಟ್ಟರ ಕೈಚಳಕ ಎದ್ದು ಕಾಣುತ್ತದೆ. ಯಡಿಯೂರೈತಪ್ಪ ಎಂಬ ಶೀರ್ಷಿಕೆ ತುಂಬಾ ಚೆನ್ನಾಗಿದೆ ಎಂದೇನು ಅನಿಸಲಿಲ್ಲವಾದರೂ, ಒಟ್ಟು ಬಜೆಟ್‌ನ ಎಲ್ಲ ಅಂಶಗಳನ್ನು ವಿವರಿಸುವ ಸುದ್ದಿಗಳು, ಆ ಕುರಿತು ತಜ್ಞರ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಣಿತರ ಅಭಿಪ್ರಾಯಗಳು ಸೊಗಸಾಗಿ ಮೂಡಿಬಂದಿದೆ.

ಕನ್ನಡಪ್ರಭಕ್ಕೆ ಪೈಪೋಟಿ ನೀಡುತ್ತಿರುವುದು ಇವತ್ತಿನ ಉದಯವಾಣಿ. ರವಿ ಹೆಗಡೆ ಉದಯವಾಣಿ ಸೇರಿದ ದಿನದಿಂದಲೇ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಎಂಬ ಸುದ್ದಿಯೇನೋ ಇತ್ತು. ಇವತ್ತಿನ ಪತ್ರಿಕೆ ಅದನ್ನು ಸಾರಿ ಹೇಳುತ್ತಿದೆ. ಮುಖಪುಟದ ಅಗ್ರಲೇಖನ ಬಜೆಟ್‌ನ ಒಳಹೊರಗನ್ನು ಅರ್ಥ ಮಾಡಿಸುವಲ್ಲಿ ಸಫಲವಾಗಿದೆ.

ವಿಜಯ ಕರ್ನಾಟಕ ಮುಖಪುಟದ ಕಾನ್ಸೆಪ್ಟ್ ಹೊಸತನದಿಂದ ಕೂಡಿದೆ. ಒಳಗೆ ನಾಲ್ಕು ವಿಶೇಷ ಪುಟಗಳೇನೋ ಇವೆ. ಆದರೆ ಇನ್ನಷ್ಟು ಕವರೇಜ್ ಬೇಕಿತ್ತು ಅನಿಸುತ್ತದೆ. ಮುಖಪುಟದ ಹೆಡ್ಡಿಂಗು ಆಕರ್ಷಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪಾದಕ ಇ.ರಾಘವನ್ ಮುಖಪುಟದಲ್ಲೇ ಬರೆದಿರುವ ಪುಟ್ಟ ಟಿಪ್ಪಣಿ ಗಮನಸೆಳೆಯುತ್ತದೆ. ಕೃಷಿ ಮತ್ತು ಸಾಮಾನ್ಯ ಬಜೆಟ್ ವರ್ಣನೆಗೆ ಅವರು ಬಳಸಿರುವ ಡಬಲ್ ಬ್ಯಾರಲ್ ಗನ್‌ನ ಉಪಮೆಯೂ ಚೆನ್ನಾಗಿದೆ.

ಪ್ರಜಾವಾಣಿ ಸಂಪಾದಕೀಯ ಬಜೆಟ್ ಕುರಿತು ಸಮರ್ಥ ಒಳನೋಟ ನೀಡುತ್ತಿದೆ. ಆದರೆ ಉಳಿದ ಪುಟಗಳು ಸಪ್ಪೆ. ಹೇಳುವುದನ್ನೇ ಆಕರ್ಷಕ ವಿನ್ಯಾಸದಲ್ಲಿ ಹೇಳಿದರೆ ಹೆಚ್ಚು ಜನರಿಗೆ ಇಷ್ಟವಾಗಬಹುದಿತ್ತೇನೋ.

ಹೊಸದಿಗಂತದ ಪುಟಪುಟಗಳ ವಿನ್ಯಾಸ ಸೂಪರ್. ಆದರೆ ಈ ಮಾತನ್ನು ವಿನ್ಯಾಸಕ್ಕೆ ಸೀಮಿತವಾಗಿ ಹೇಳಬೇಕಾಗುತ್ತದೆ. ಯಾಕೆಂದರೆ ಇದು ಯಡಿಯೂರಪ್ಪನವರ ಜಾಹೀರಾತು ಪುರವಣಿಯ ಹಾಗೆ ರೂಪಿತವಾಗಿದೆ. ಏಕಮುಖಿಯಾದ ವಿಶ್ಲೇಷಣೆಗಳಿಂದ ಓದುಗರಿಗೆ ಯಾವ ಉಪಯೋಗವೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನು ನ್ಯೂಸ್ ಚಾನಲ್‌ಗಳ ಪೈಕಿ ಹೆಚ್ಚು ಆಕರ್ಷಿಸಿದ್ದು ಸುವರ್ಣ ನ್ಯೂಸ್. ಎಚ್.ಆರ್.ರಂಗನಾಥ್ ಅವರ ಪ್ರೌಢಿಮೆ ವರ್ಕ್ ಔಟ್ ಆಯಿತು. ಇತ್ತ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ಮತ್ತು ಶಿವಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮಗಳೂ ಚೆನ್ನಾಗಿದ್ದವು. ಸಮಯ ಟಿವಿಯವರಿಗೆ ಇದು ಮೊದಲ ಬಜೆಟ್. ಆದರೂ ಓದುಗರನ್ನು ಸೆಳೆಯಲು ಅದು ಯಶಸ್ವಿಯಾಯಿತು. ಜನಶ್ರೀಯಲ್ಲಿ ರಮಾಕಾಂತ್ ಬಜೆಟ್ ಕುರಿತ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಜನಶ್ರೀ ಹೊಸ ಚಾನಲ್, ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು.

ಕೃಪೆ: ಸಂಪಾದಕೀಯ

ಕ್ಯಾಮರಾಮನ್ ಸ್ವಗತ''

ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಇವನಿಗೆ ಯಾರ‍್ಯಾರೋ ನೆನಪಾಗುತ್ತಾರೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನು ಬಿಟ್ಟು ಬಂದ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಬೆಂಗಳೂರೆಂಬ ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ ಕ್ಯಾಮೆರಾ ಕೊಟ್ಟು, ಕ್ಯಾಮೆರಾ ಮ್ಯಾನ್ ಅನ್ನೋ ಲೇಬಲ್ ಹಚ್ಚಲಾಗಿತ್ತು. ವಾಹಿನಿಯೊಂದರ ಕ್ರೈಂ ಕಾರ್ಯಕ್ರಮಕ್ಕೆ ಕ್ಯಾಮೆರಾ ಪರ್ಸನ್. ಜೋಡಿಯಾಗಿ ಒಬ್ಬ ವರದಿಗಾರ. ಸುಮ್ಮನೆ ಕುಳಿತ ಇವನಿಗೆ ಏನೇನೋ ನೆನಪಾಗುತ್ತದೆ.

*


ಬಿಳಿ ಬಣ್ಣದ ಕಾಟನ್ ಸೀರೆ ಉಟ್ಟವಳ ಮುಖದಲ್ಲಿ ಅನುಭವದ ಗಾಂಭೀರ್ಯವನ್ನು ಮರೆಮಾಚಿದ ಆತಂಕದ ಛಾಯೆ. ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯೆ. ಜೀವನದುದ್ದಕ್ಕೂ ತಿಂಗಳಿಗೊಮ್ಮೆ ಬರುವ ಪಗಾರದ ಹೊರತು ನಯಾಪೈಸೆ ಹೆಚ್ಚಿಗೆ ಮುಟ್ಟದ ಆಕೆ ಕೈಗಳು ಕಂಪಿಸುತ್ತಿದ್ದವು. ಹಿಂದಿನ ದಿನವಷ್ಟೆ ಸಂತಾನಹರಣ ಶಸ್ತ್ರಚಿಕಿತ್ಸೆಯೊಂದು ಕೈಕೊಟ್ಟು ಎರಡು ಮಕ್ಕಳ ತಾಯಿಯೊಬ್ಬಳು ಆಸ್ಪತ್ರೆಯಲ್ಲೇ ಅಸುನೀಗಿಬಿಟ್ಟಿದ್ದಳು. ವೈದ್ಯೆಯ ಪಾಲಿಗೆ ಅವತ್ತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕೋರ್ಟ್‌ಮಾರ್ಷಲ್ ಆಗಿತ್ತು. ಆತಂಕ, ಪಾಪಪ್ರಜ್ಞೆ, ದುಃಖ, ವೇದನೆಗಳ ನಡುವೆಯೇ ಆಕೆ ಕ್ಯಾಮೆರಾ ಎದುರು ಕುಳಿತು ಸೆರಗು ಸರಿಪಡಿಸಿಕೊಂಡು, ಚಾನಲ್ ಲೋಗೋ ಹಿಡಿದು ಕುಳಿತಿದ್ದ ಇವನ ಮುಖ ನೋಡಿದರು. ಬಹುಶಃ ಕೊನೆಯ ಮಗನ ನೆನಪಾಗಿರಬೇಕು.

ಕೇಳಿದ ಪ್ರಶ್ನೆಗಳಿಗೆ, ಮೈಮೇಲೆ ಬಂದ ಆರೋಪಗಳಿಗೆ ಉತ್ತರ ಕೊಡಲು ಹೆಣಗಾಡಿ, ಕಣ್ಣು ತುಂಬಿ ಬಂದ ನೀರನ್ನು ತಡೆಹಿಡಿದು ನಾಲ್ಕಾರು ನಿಮಿಷದ ಕ್ಲಾರಿಫಿಕೇಶನ್ ಕೊಟ್ಟಿದ್ದಾಯಿತು. ಧುತ್ತೆಂದು ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಉತ್ತರವಿಲ್ಲ ಅಂತ ನಿರ್ಧರಿಸಿಯಾದ ಮೇಲೆ, ಇನ್ನು ನಾನು ಜೀವನದಲ್ಲಿ ಸ್ಟೆತಸ್ಕೋಪ್ ಮುಟ್ಟಲ್ಲ. ಈವರೆಗೆ ಯಾವುದೋ ಹಳ್ಳಿಗಳಲ್ಲಿ, ತಾಂಡಗಳಲ್ಲಿ ಲಕ್ಷಾಂತರ ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೆ. ಈಗ ಎಲ್ಲವೂ ಮಣ್ಣುಪಾಲಾಗಿಹೋಯ್ತು ಅಂತ ಹೇಳಿ ಕಣ್ಣೀರು ಒರೆಸಿಕೊಂಡಿದ್ದರು ತಾಯಿ ಹೃದಯದ ಆ ಮಹಿಳಾ ವೈದ್ಯೆ. ಆಕೆ ತನ್ನ ಮೇಲಾಧಿಕಾರಿಗೆ ಯಾವತ್ತು ರೇಶ್ಮೆ ಸೀರೆ, ಬಂಗಾರ ಬಳೆಯನ್ನು ಕಪ್ಪ ಸಲ್ಲಿಸಿರಲಿಲ್ಲ. ತನ್ನ ವೃತ್ತಿ ಬದುಕಿನಲ್ಲಿ ಖಾಸಗಿ ಆಸ್ಪತ್ರೆಗೆ ವಿಸಿಟಿಂಗ್ ಡಾಕ್ಟರ್ ಆಗಿ ಹೋಗಿರಲಿಲ್ಲ.

ಇದೆಲ್ಲ ಕಳೆದು ಮೂರು ತಿಂಗಳ ನಂತರ ಒಂದು ಶುಕ್ರವಾರ ಇವನಿಗೆ ಅವರ ನೆನಪಾಗುತ್ತದೆ. ಅವರ ನಂಬರ್ ಹುಡುಕಿ, ಹೇಗಿದ್ದೀರಾ ಮೇಡಂ? ಅಂದ. ಅತ್ತ ಕಡೆಯಿಂದ ಅಣೆಕಟ್ಟು ಒಡೆದಂತಾಗಿ ಅಳು ಮಾತ್ರ ಕೇಳಿಸತೊಡಗಿತು. ಇವನ ಎದೆಯಲ್ಲಿ ಯಾಕೋ ಚಳುಕ್ಕೆಂದ ಭಾವ. ಆಕೆ ತೀರಿಕೊಂಡಿದ್ದು ಇಂತಹದೆ ಒಂದು ಶುಕ್ರವಾರ, ಹಾಗಾಗಿ ಅವತ್ತಿಂದ ಪ್ರತಿ ವಾರ ದೇವರ ಬಳಿ ಬಂದು ಅಳುವ ಕೆಲಸವಾಗುತ್ತಿದೆ. ಇದರಿಂದ ನನಗೆ ಹೊರಬರಲು ಆಗುತ್ತಿಲ್ಲ ಎಂದ ಅವರು ಮತ್ತೆ ಅಳುತ್ತಾರೆ.
ಅವತ್ತವಳು ಗಂಡನಿಗೆ ಗೊತ್ತಿಲ್ಲದೆ ತನ್ನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಬೆಳೆಯುತ್ತಿದೆ ಎಂಬ ವಿಷಯವನ್ನು ಪ್ರಾಮಾಣಿಕವಾಗಿ ತಿಳಿಸಿದ್ದರೆ ಸಾಕಿತ್ತು. ಆಕೆಯ ಸಂಸಾರ-ಪ್ರಾಣ ಎರಡು ಉಳಿಯುತ್ತಿತ್ತು. ಏನ್ಮಾಡೋದು ಎಲ್ಲಾ ನನ್ನ ಗ್ರಹಚಾರ. ಅವಳ ಸಾವಿಗಾಗಿ ನಾನು ಇವತ್ತು ಕಣ್ಣೀರು ಹಾಕುತ್ತಿದ್ದೇನೆ ಎಂದವರು ಸುದೀರ್ಘ ನಿಟ್ಟುಸಿರು ತೆಗೆಯುತ್ತಾರೆ. ಮಳೆ ನಿಂತ ಹೋದ ಮೇಲೂ ಹನಿ ಉದುರುವಂತೆ ನಡುನಡುವೆ ಬಿಕ್ಕುತ್ತಾರೆ.

ಸುಮ್ಮನೆ ಕುಳಿತ ಇವನಿಗೆ ಆಗಾಗ ಆಕೆಯ ದೇವರ ಪಟದ ಎದುರು ಕಣ್ಣೀರಾಗುತ್ತಿರುವ ಅವರ ನೆನಪಾಗುತ್ತದೆ.

*

ಅದೊಂದು ಮನಕಲಕುವ ದೃಶ್ಯ. ಹೆತ್ತ ತಾಯಿಯ ಹೆಣದ ಮುಂದೆ ಮಾಂಸದ ಮುದ್ದೆಯಂತೆ ಕುಳಿತ ಆ ಯುವತಿಯ ಅಳು ಮುಗಿಲು ಮುಟ್ಟಿತ್ತು. ಶಾಮಿಯಾನ ಹಾಕಿ, ಅದರ ಮುಂದೆ ಸಾವನ್ನು ಸಾರಲೆಂದೇ ಹೊಗೆಯಾಡುವ ಕೊಳ್ಳಿ ಇರಿಸಿದ್ದರು. ಅಲ್ಲಿ ಐವತ್ತರ ಆಸುಪಾಸಿನ, ಬೆಳ್ಳಗಿನ ಹೆಂಗಸೊಬ್ಬಳ ಶವ ಇಡಲಾಗಿತ್ತು. ಶವದ ಸುತ್ತ ಹಾಕಿದ್ದ ಬಾಡಿಗೆ ಕುರ್ಚಿಗಳ ಕೊನೆಯ ಸಾಲಿನಲ್ಲಿ ಒಂದಷ್ಟು ಹೆಂಗಸರು ಮ್ಲಾನವಾದ ಮುಖಮಾಡಿಕೊಂಡು ಕುಳಿತಿದ್ದರು. ಅಲ್ಲಿಗೆ ಬಂದಿಳಿಯಿತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ. ಒಂದಷ್ಟು ಆತಂಕ, ಮತ್ತೊಂದಿಷ್ಟು ಕರ್ತವ್ಯ ಪ್ರಜ್ಞೆಯಿಂದ ಪೂರಕ ವಾತಾವರಣಕ್ಕಾಗಿ ಕಾದ ಇವನು ಆಕೆ ಮುಂದೆ ಮೈಕ್ ಹಿಡಿದ. ಮಾತನಾಡಲೇಬೇಕಾದ ಅನಿವಾರ್ಯತೆಯನ್ನು ಕ್ಯಾಮೆರಾ ಸೆರೆಹಿಡಿಯುತ್ತಿತ್ತು. ನಮ್ಮ ಅಪ್ಪನೆ ಅಮ್ಮನನ್ನ ಕೊಂದಿದ್ದು. ಅವನಿಗೆ ಮತ್ತೊಬ್ಬಳು ಹೆಂಡತಿ ಇದ್ದಾಳೆ ಅಂತೆಲ್ಲಾ ಹೇಳುತ್ತಾ ಕಣ್ಣಲ್ಲಿ ತುಂಬಿದ್ದ ನೀರನ್ನು ಹೊರಗೆಡವಿದಳು.

ಅದೇ ಹೊತ್ತಿಗೆ ಪಕ್ಕದ ಪೊಲೀಸ್ ಠಾಣೆಯಲ್ಲಿ, ಪೊಲೀಸರು ತಂದುಕೊಟ್ಟಿದ್ದ ಚಿತ್ರಾನ್ನ ತಿನ್ನುತ್ತಿದ್ದ ಆ ಮಹಾತಂದೆ. ಆತ ಕೊಲೆಗಾರ ಇರಲಿಕ್ಕಿಲ್ಲ ಅಂತ ಪ್ರಾಥಮಿಕ ತನಿಖೆಯಲ್ಲೇ ಪೊಲೀಸರಿಗೂ ಮನವರಿಕೆಯಾಗಿತ್ತು. ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕಂಡಿದ್ದೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆದು ಎದುರಿಗೆ ಕೂರಿಸಿಕೊಂಡರು. ಕೂದಲೇ ಇಲ್ಲದ ತಮ್ಮ ತಲೆಯ ಮೇಲೆ ಪೊಲೀಸ್ ಹ್ಯಾಟು ಹಾಕಿಕೊಂಡು ಖಾಲಿ ತಲೆ ತೋರಿಸಬ್ಯಾಡ್ರಪ್ಪೋ.. ಅಂದರು. ಅಷ್ಟೊತ್ತಿಗೆ ಅವರು ಕುಳಿತಿದ್ದ ಕಚೇರಿಯ ಎಲ್ಲಾ ಕಿಟಕಿ, ಬಾಗಿಲುಗಳನ್ನ ತೆಗೆದು, ಅವರ ಮುಖಕ್ಕೆ ಬೆಳಕು ಬೀಳಿಸಿ, ಇದ್ದದರಲ್ಲೇ ಒಳ್ಳೆಯ ಫ್ರೇಮಿನ ನಡುವೆ ಅವರನ್ನ ಕೂರಿಸಲಾಯಿತು. ಅದಕ್ಕೂ ಮುನ್ನ ಎದ್ದು ಹೋದವರು ಮುಖ ತೊಳೆದು, ತೆಳುವಾದ ಪೌಡರ್ ಲೇಪಿಸಿಕೊಂಡಿದ್ದರಿಂದ ಚಂದದ ಸುವಾಸನೆ ಘಮ್ ಎನ್ನುತ್ತಾ ಅಲ್ಲಿದ್ದವರ ಮೂಗಿಗೆ ಬಡಿಯುತ್ತಿತ್ತು. ಕ್ಯಾಮೆರಾ ಚಾಲೂ ಆಗುತ್ತಿದ್ದಂತೆ ತಮ್ಮೆಲ್ಲಾ ಪಾಂಡಿತ್ಯವನ್ನು ಉಪಯೋಗಿಸಿ, ಅವರು ವರದಿ ನೀಡಿದರು. ಪೇದೆಯೊಬ್ಬ ತಂದಿಟ್ಟ ಟೀ ಕುಡಿದು, ಇನ್ನೇನು ಪ್ಯಾಕ್ ಅಪ್ ಅನ್ನಬೇಕು, ಹ್ಹಾ ಹ್ಹಾ ಹ್ಹಾ ಅಂತ ಜೋರಾದ ನಗೆ ನಗುತ್ತಾ ಸ್ವಲ್ಪ ರಿವೈಂಡ್ ಮಾಡಿ ತೋರಿಸ್ರಪ್ಪಾ..ಚಂದ ಕಾಣ್ತಿನಾ ಹೆಂಗೆ ಅಂದುಬಿಟ್ಟರು ಆ ಪ್ರಾಮಾಣಿಕ, ದಕ್ಷ ಅಧಿಕಾರಿ. ಇದೊಂದು ಅನಿವಾರ್ಯ ಕರ್ಮ ಅಂದುಕೊಂಡು ಅವರಿಗೆ ತೋರಿಸಿ ಹೊರಬರುವ ಹೊತ್ತಿಗೆ ಆಕೆಯ ಶವವನ್ನು ಮಾವಿನ ಕಟ್ಟಿಗೆ ಮೇಲಿಟ್ಟು ಬೆಂಕಿ ಹಚ್ಚಲಾಗಿತ್ತು.

ಸುಮ್ಮನೆ ಕುಳಿತ ಇವನಿಗೆ ಹೆಣದ ಮುಂದೆ ರೋಧಿಸುತ್ತಿದ್ದ ಯುವತಿ ಹಾಗೂ ಪೊಲೀಸ್ ಠಾಣೆಯಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ತಂದೆಯ ನೆನಪಾಗುತ್ತದೆ.

*

ಆಕೆ ಇನ್ನೂ ಅಪ್ರಾಪ್ತ ವಯಸ್ಸಿನ ಹುಡುಗಿ. ಆಕೆಯ ತಾಯಿ ಹಾಗೂ ಮಲತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಕೊಳಗೇರಿ ಅಂತ ಕರೆಯಬಹುದಾದ ಪ್ರದೇಶದಲ್ಲಿತ್ತು ಅವರ ಮನೆ. ಮಹಾಪಾತಕವೊಂದು ಈ ಕುಟುಂಬದ ಪಾಲಿಗೆ ಜರುಗಿ ಹೋಗಿತ್ತು. ಅಪಾರ್ಟ್‌ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಈ ಹದಿನಾಲ್ಕರ ಹುಡುಗಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಪಕ್ಕದ ಮನೆಯ ದುರುಳನೊಬ್ಬ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದ. ಅಂದು ತಂದೆ ತಾಯಿ ಒಬ್ಬಳೇ ಮಗಳನ್ನು ಬಿಟ್ಟು ದೂರ ಊರಿಗೆ ಹೋಗಿದ್ದರು ಎಂಬುದು ಬೇಜವಾಬ್ದಾರಿ ಅನ್ನಿಸುತ್ತಿತ್ತಾದರೂ, ಅದು ಪುಟ್ಟ ವಯಸ್ಸಿನ ಹುಡುಗಿಯಿಂದ ಭಾರಿ ದಂಡವನ್ನೇ ಕಟ್ಟಿಸಿತ್ತು. ಆದರೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಪುಟ್ಟ ವಯಸ್ಸಿನ ಹುಡುಗಿ ಆತನೊಂದಿಗೆ ಮುಂಚಿನಿಂದಲೆ ಸಂಬಂಧ ಹೊಂದಿದ್ದಳು ಅಂತ ಷರಾ ಬರೆದು ಮುಗಿಸುವ ತವಕದಲ್ಲಿದ್ದರು. ಹಾಗಂತ ಬಂದ ಮಾಹಿತಿಯನ್ನು ಹಿಡಿದುಕೊಂಡು, ಶಿಥಿಲಾವಸ್ಥೆಯಲ್ಲಿದ್ದ ಅವರ ಮನೆಗೆ ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಬಂದಾಗ ತಾಯಿ ಮಗಳಿಬ್ಬರು ಒಬ್ಬರಿಗೊಬ್ಬರು ಆತುಕೊಂಡು ಭೀಕರವಾಗಿ ಅಳುತ್ತಿದ್ದರು.

ಮನೆಯ ಬಡತನ, ಅವರ ದೌರ್ಭಾಗ್ಯವನ್ನು ಕ್ಯಾಮೆರಾ ಕಣ್ಣು ನಿಧಾನವಾಗಿ ಚಿತ್ರೀಕರಿಸಿಕೊಂಡಿತು. ಆದರೂ ಹರಿದುಹೋಗಿದ್ದ ಗೋಡೆಗಳನ್ನು ಮರೆಮಾಚಿ, ಮನೆಯಲ್ಲಿ ಇಲ್ಲದ ಬೆಳಕನ್ನು ಕೃತಕವಾಗಿ ಸೃಷ್ಟಿಸಿ ತಾಯಿ ಮಗಳಿಬ್ಬರನ್ನ ಕೂರಿಸಿ ಮಾತನಾಡಿಸಲಾಯಿತು. ಟೇಪು ಸುತ್ತಿಯಾಗುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಆ ತಾಯಿಯ ಕಂಕುಳಲ್ಲಿದ್ದ ಒಂದು ವರ್ಷದ ಕಂದಮ್ಮ ಹಸಿವೆಯಿಂದ ಅಳಲಾರಂಭಿಸಿತು. ಮೊದಲೆ ಹಂಚಿಕಡ್ಡಿಯಂತಾಗಿದ್ದ ತಾಯಿ ಮೊಲೆಹಾಲು ಇಲ್ಲದ ಕಾರಣಕ್ಕೇನೋ, ಬಿಸಿ ನೀರನ್ನು ಆರಿಸಿ ಕಂದಮ್ಮನ ಬಾಯಿಗೆ ಬಿಡಲಾರಂಭಿಸಿದಳು. ಇದನ್ನು ನೋಡುತ್ತಿದ್ದ ಅವರಿಬ್ಬರ ಹೊಟ್ಟೆತೊಳೆಸಿದಂತಾಗಿ, ಸಮಸ್ಥ ದೌರ್ಭಾಗ್ಯಗಳೂ ಕಣ್ಣೆದುರು ವಿಕಟವಾಗಿ ನಕ್ಕಂತಾಗಿ ಮನೆಯಿಂದ ಹೊರಬಂದರು. ಮಧ್ಯಾಹ್ನದ ಊಟಕ್ಕೆಂದು ಬೆಳಗ್ಗೆ ಮಾಡಿದ ನೂರು ರೂಪಾಯಿ ಸಾಲದಲ್ಲಿ ಉಳಿದ ತೊಂಭತ್ತು ರೂಪಾಯಿಯನ್ನು ತಾಯಿಯ ಮುಂದಿಟ್ಟು ಹೊರಬಂದವರಿಗೆ ಹಗಲೇ ಕಂಡ ದುಸ್ವಪ್ನದಿಂದ ಚೇತರಿಸಿಕೊಳ್ಳುವುದಕ್ಕೆ ಸಮಯ ಬೇಕಾಯಿತು. ಇದಾದ ವಾರದ ನಂತರ ಆ ತಾಯಿಮಗಳ ಟೇಪು ಆಫೀಸಿನ ಮೂಲೆಯಲ್ಲಿ ಬಿದ್ದಿದ್ದು ಕಂಡುಬಂತು.

ಸುಮ್ಮನೆ ಕುಳಿತ ಇವನಿಗೆ ಮಾನಭಂಗಕ್ಕೀಡಾದ ಆ ಹುಡುಗಿ, ಕಂಕುಳಲ್ಲಿದ್ದ ಕಂದಮ್ಮನ ಬಾಯಿಗೆ ಬಿಸಿನೀರು ಬಿಡುತ್ತಿದ್ದ ಆ ತಾಯಿಯ ನೆನಪಾಗುತ್ತದೆ.

*

ಜನಜಂಗುಳಿಯ ಟ್ರಾಫಿಕ್ ದಾಟಿಕೊಂಡು ಪಾತಕ ಕಾರ್ಯಕ್ರಮದ ಕ್ಯಾಮೆರಾ ಆ ಏರಿಯಾ ತಲುಪುವ ಹೊತ್ತಿಗೆ ಪೊಲೀಸರು ಹೆಣವನ್ನು ಶವಪರೀಕ್ಷೆಗೆಂದು ಆಸ್ಪತ್ರ್ರೆಗೆ ಸಾಗಿಸಿದ್ದರು. ಜನನಿಬಿಡ ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೆಯೇ ಇದ್ದವು. ರಸ್ತೆಯ ಇಕ್ಕೆಲಗಳಲ್ಲಿ, ಅವರವರ ಮನೆಯ ಬಾಲ್ಕನಿಗಳಲ್ಲಿ ನಿಂತಿದ್ದ ಜನ ತಮ್ಮೆದುರೇ ಆದ ಘಟನೆಯನ್ನು ಕಣ್ಣೆವೆ ಮುಚ್ಚದೆ ನೋಡಿದ್ದರು. ಅಲ್ಲಿ ನಡೆದದ್ದು ಏನು ಎಂದರೆ ಯಾವನೋ ಒಬ್ಬನನ್ನು, ಯಾರೋ, ಯಾವುದೋ ಕಾರಣಕ್ಕೆ ನಡುಬೀದಿಯಲ್ಲಿ ಕತ್ತರಿಸಿ ಹಾಕಿದ್ದರು. ಆ ಹೊತ್ತಿಗೆ ಶಾಲೆಗೆ ಮಕ್ಕಳನ್ನು ಬಿಡಲು ಹೊರಟವರು, ಮುಂಜಾನೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರು, ಮನೆಯ ಮುಂದೆ ಹಿಂದಿನ ದಿನ ತೊಳೆದ ಹಸಿ ಬಟ್ಟೆಯನ್ನು ಹರಡುತ್ತಿದ್ದ ಗೃಹಿಣಿಯರು, ಹೀಗೆ ಅಲ್ಲಿದ್ದ ಪ್ರತಿಯೊಬ್ಬರು ಘಟನೆಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದರು.

ಕ್ಯಾಮೆರಾ ಕೊಲೆಯಾದ ಜಾಗವನ್ನು ಚಿತ್ರೀಕರಿಸಿಕೊಂಡು, ನಡೆದ ಘಟನೆಯನ್ನು ಪ್ರಾಮಾಣಿಕವಾಗಿ ವಿವರಿಸುವ ದನಿಗಾಗಿ ಹುಡುಕಾಡುತ್ತಿತ್ತು. ಅಷ್ಟೊತ್ತಿಗಾಗಲೇ ಇಂತಹ ಹಲವಾರು ಕ್ಯಾಮೆರಾಗಳಿಗೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ ಗೃಹಿಣಿಯ ಮುಂದೆ ಮೈಕ್ ಇಟ್ಟು ಪ್ರಶ್ನೆಯೊಂದನ್ನ ಹಾಕಲಾಯಿತು. ಆಕೆ ಹೇಳಿದ್ದಿಷ್ಟು...

ನಾನು ಮನೆಯ ಮುಂದೆ ಬಟ್ಟೆ ಹರಡುತ್ತಿದ್ದೆ. ಜನ ಕೂಗಿಕೊಂಡರು. ತಿರುಗಿ ನೋಡಿದರೆ, ಅದೇ ಆ ದೇವಸ್ಥಾನವಿದೆಯಲ್ಲ, ಅದರ ಎದುರಿಗೆ ಒಬ್ಬ ಓಡಿಕೊಂಡು ಬಂದು ಬಿದ್ದು ಬಿಟ್ಟ. ಅವನ ಹಿಂದೆ ಮಚ್ಚು ಲಾಂಗುಗಳನ್ನು ಹಿಡಿದುಕೊಂಡು ನಾಲ್ಕಾರು ಜನ ಅಟ್ಟಿಸಿಕೊಂಡು ಬರುತ್ತಿದ್ದರು. ಅವನು ಕೆಳಗೆ ಬೀಳುತ್ತಿದ್ದಂತೆ ಅವರೆಲ್ಲಾ ಅವನ ಮೇಲೆ ಲಾಂಗು ಬೀಸಿ ಓಡಿಹೋದರು. ಸ್ವಲ್ಪ ಹೊತ್ತು ಒದ್ದಾಡಿದ ಅವನು ನಂತರ ಸುಮ್ಮನಾದ. ಯಾರೋ ಪೊಲೀಸರಿಗೆ ಫೋನ್ ಮಾಡಿದರು. ಅವರು ಬಂದು ಹೆಣ ತೆಗೆದುಕೊಂಡು ಹೋದರು. ಎಲ್ಲಾ ಟೀವಿಲಿ ನೋಡಿದಂಗೆ ಆಯ್ತು.

ಸುಮ್ಮನೆ ಕುಳಿತ ಇವನಿಗೆ ಟೀವಿಯ ನೆನಪಾಗುತ್ತದೆ.

(ಇದು ಪತ್ರಕರ್ತರೊಬ್ಬರು ಕಳಿಸಿದ ಬರಹ. ಈ ಅನುಭವ ಯಾರದ್ದಾದರೂ ಆಗಿರಬಹುದಾದ್ದರಿಂದ ಹೆಸರು ಹಾಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ ಅವರು?

ಕೃಪೆ : ಸಂಪಾದಕೀಯ)